ಜಿಲ್ಲಾಸುದ್ದಿಗಳು

ನಾಡಕಚೇರಿಯಲ್ಲಿ ಜಾತಿ-ಆದಾಯ ಪ್ರಮಾಣಪತ್ರಕ್ಕೆ ಭಾರಿ ದಟ್ಟಣೆ; ವಿದ್ಯಾರ್ಥಿಗಳ ದಾಖಲಾತಿಗೆ ತೊಂದರೆ

ಕೆಂಭಾವಿ: ಶಾಲೆ-ಕಾಲೇಜುಗಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಜಾತಿ ಹಾಗೂ ಆದಾಯ ಪ್ರಮಾಣಪತ್ರಗಳಿಗಾಗಿ ಕೆಂಭಾವಿ ನಾಡಕಚೇರಿಯಲ್ಲಿ ಸಾರ್ವಜನಿಕರ ಭಾರಿ ದಟ್ಟಣೆ ಕಂಡುಬಂದಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನವೋದಯ ಶಾಲೆಗಳ ಅರ್ಜಿ, ಶಾಲೆ–ಕಾಲೇಜು ದಾಖಲಾತಿ, ವಿದ್ಯಾರ್ಥಿ ನಿಲಯ ಪ್ರವೇಶ ಹಾಗೂ ವಿವಿಧ ವಿದ್ಯಾರ್ಥಿವೇತನಗಳ ಸೌಲಭ್ಯ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯವಾಗಿರುವುದರಿಂದ, ಪ್ರಮಾಣಪತ್ರಗಳ ವಿತರಣೆಯಲ್ಲಿ ಉಂಟಾಗಿರುವ ವಿಳಂಬ ವಿದ್ಯಾರ್ಥಿಗಳಲ್ಲಿ ಆತಂಕ ಉಂಟುಮಾಡಿದೆ. ಸಮಯಕ್ಕೆ ದಾಖಲೆಗಳು ದೊರೆಯದಿದ್ದರೆ ದಾಖಲಾತಿಯೇ ವಿಳಂಬವಾಗುವ ಭೀತಿ ವ್ಯಕ್ತವಾಗಿದೆ.

ಇದೇ ವೇಳೆ, ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಸಿದರೆ ಮಾತ್ರ ರೇಷನ್ ಸೌಲಭ್ಯ ದೊರೆಯಲಿದೆ ಎಂಬ ವದಂತಿ ಹರಡಿರುವ ಪರಿಣಾಮ, ಅಗತ್ಯವಿಲ್ಲದವರೂ ಸಹ ಪ್ರಮಾಣಪತ್ರ ಪಡೆಯಲು ನಾಡಕಚೇರಿಗೆ ಧಾವಿಸುತ್ತಿದ್ದಾರೆ ಎನ್ನಲಾಗಿದೆ. ಇದರಿಂದ ನಿಜವಾಗಿಯೂ ಪ್ರಮಾಣಪತ್ರದ ಅವಶ್ಯಕತೆ ಇರುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಅನಗತ್ಯ ತೊಂದರೆ ಎದುರಾಗಿದೆ.

ಪರಿಶಿಷ್ಟ ಜಾತಿ ಪ್ರವರ್ಗಗಳಾದ ಎ, ಬಿ ಹಾಗೂ ಸಿ ವರ್ಗದವರಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕಚೇರಿಗೆ ಆಗಮಿಸುತ್ತಿದ್ದಾರೆ. ಅಗತ್ಯ ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಹತೆ ಕುರಿತು ಸಮರ್ಪಕ ಮಾಹಿತಿ ಲಭ್ಯವಾಗದ ಕಾರಣ ಹಲವರು ಕಚೇರಿ ಎದುರು ಸರತಿಸಾಲಿನಲ್ಲಿ ಗಂಟೆಗಟ್ಟಲೆ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ಎಲ್ಲಾ ಜಾತಿಯ ಸಾರ್ವಜನಿಕರು ಕೂಡ ಪ್ರಮಾಣಪತ್ರಕ್ಕಾಗಿ ಒಂದೇ ವೇಳೆ ಅರ್ಜಿ ಸಲ್ಲಿಸುತ್ತಿರುವುದರಿಂದ ಕಾರ್ಯನಿರ್ವಹಣೆಯ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಿದ್ದು, ವಿದ್ಯಾರ್ಥಿಗಳ ಅಗತ್ಯಗಳಿಗೆ ಆದ್ಯತೆ ಸಿಗುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಕೂಡಲೇ ಸರ್ಕಾರ ಹಾಗೂ ಸಂಬಂಧಿತ ಇಲಾಖೆಗಳು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವುದು, ಅರ್ಜಿ ಪ್ರಕ್ರಿಯೆ ಕುರಿತು ಸ್ಪಷ್ಟ ಮಾಹಿತಿ ನೀಡುವುದು ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಕೌಂಟರ್ ತೆರೆಯುವ ಮೂಲಕ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button