ಕಲ್ಯಾಣ ಕರ್ನಾಟಕಜಿಲ್ಲಾಸುದ್ದಿಗಳು

ಬೆಳೆ ವಿಮೆ ತಾರತಮ್ಯ ಸರಿಪಡಿಸಿ : ದೊಡ್ಡಪ್ಪಗೌಡ ಪಾಟೀಲ್ ನರಿಬೋಳ

ಜೇವರ್ಗಿ, ಆ. 2: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ರೈತರಿಗೆ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಉಂಟಾಗಿರುವುದನ್ನು ತಕ್ಷಣ ಸರಿಪಡಿಸಿ, ಅರ್ಹ ರೈತರಿಗೆ ಬಾಕಿ ಇರುವ ಎರಡನೇ ಕಂತಿನ ಬೆಳೆವಿಮೆ ಪರಿಹಾರವನ್ನು ಶೀಘ್ರವೇ ಬಿಡುಗಡೆ ಮಾಡಬೇಕು ಎಂದು ಜೇವರ್ಗಿ ಕ್ಷೇತ್ರದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಆಗ್ರಹಿಸಿದರು.

ಈ ಕುರಿತು ಅವರು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರನ್ನು ಕಲಬುರಗಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಮನವಿಯಲ್ಲಿ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಸಾಥಖೇಡ, ಬಿಳವಾರ, ಬಳಬಟ್ಟಿ, ಯಾಳವಾರ, ಕೋಳಕೂರ, ಕೂಡಿ, ವರವಿ, ಕಡಕೋಳ, ನೆಲೋಗಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಎರಡನೇ ಕಂತಿನ ಬೆಳೆವಿಮೆ ಪರಿಹಾರ ಇನ್ನೂ ಜಮೆಯಾಗಿಲ್ಲ ಎಂದು ವಿವರಿಸಿದರು.

ರೈತರ ಸಂರಕ್ಷಣೆ ಪೋರ್ಟಲ್‌ನಲ್ಲಿ ಅನೇಕ ರೈತರ ಹೆಸರುಗಳು ‘ಸಿಸಿಐ ಎಲಿಜೆಬಲ್’ ಎಂದು ತೋರಿಸುತ್ತಿರುವ ಕಾರಣ ತಾಂತ್ರಿಕ ಸಮಸ್ಯೆ ಉಂಟಾಗಿ ಬೆಳೆವಿಮೆ ಪರಿಹಾರ ದೊರೆಯುತ್ತಿಲ್ಲ. ಸಿಸಿಐ ವರದಿಯನ್ನು ಶೀಘ್ರ ಪೂರ್ಣಗೊಳಿಸಿ, ತಾಂತ್ರಿಕ ದೋಷಗಳನ್ನು ಸರಿಪಡಿಸುವ ಮೂಲಕ ರೈತರಿಗೆ ಬೆಳೆ ಹಾನಿಗೆ ಅನುಗುಣವಾದ ಪರಿಹಾರವನ್ನು ಅವರ ಖಾತೆಗೆ ಜಮಾ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ತಕ್ಷಣ ಕ್ರಮಕ್ಕೆ ಸಚಿವರ ಸೂಚನೆ:ಮನವಿ ಸ್ವೀಕರಿಸಿದ ಸಚಿವ ಡಾ. ಶರಣಪ್ರಕಾಶ ಪಾಟೀಲ ಅವರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ತಕ್ಷಣವೇ ಜಿಲ್ಲಾಧಿಕಾರಿ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಅಗತ್ಯ ಕ್ರಮ ಕೈಗೊಂಡು ರೈತರಿಗೆ ಬೆಳೆವಿಮೆ ಪರಿಹಾರ ದೊರಕುವಂತೆ ನೋಡಿಕೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಗೌಡಪ್ಪಗೌಡ ಅಂಬರಬೇಡ, ಮಲ್ಲಣ್ಣಗೌಡ ಕೊಡಂಬನಳ್ಳಿ (ಬಿಳವಾರ), ಬಾಪುಗೌಡ, ಅಲ್ಲಾಪಟೇಲ್, ಮಲ್ಲಣ್ಣಗೌಡ ನೇರಡಗಿ, ಶರಣು ಪೂಜಾರಿ, ಸಗೀರ ಪಟೇಲ್, ಚೆನ್ನಪ್ಪಗೌಡ, ಶಿವಯ್ಯ ಹಿರೇಮಠ, ಶಾಂತಗೌಡ ಮಾರಡಗಿ, ನಿಂಬಣ್ಣ ರಾಠೋಡ, ಶರಣಗೌಡ ಮಲ್ಲಾಬಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button