ಆ.16ರಂದು ಮಹಿಳಾ ಕಾವ್ಯ ಸಮ್ಮೇಳನ: ಶಕುಂತಲಾ ಪಾಟೀಲ ಜಾವಳಿ ಸರ್ವಾಧ್ಯಕ್ಷೆ

ಕಲಬುರಗಿ, ಆ. 16: ಜಿಲ್ಲೆಯ ಮಹಿಳಾ ಕವಯಿತ್ರಿಯರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಅವರ ಸಾಹಿತ್ಯ ಪ್ರತಿಭೆಗೆ ಉತ್ತೇಜನ ನೀಡುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ, ಕರ್ನಾಟಕ ರಾಜ್ಯ ಸರಕಾರಿ ಮಹಿಳಾ ನೌಕರರ ಸಂಘ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಗರದ ಕನ್ನಡ ಭವನದಲ್ಲಿ ಆಗಸ್ಟ್ 16ರಂದು ನಡೆಯಲಿರುವ ಕಲಬುರಗಿ ಜಿಲ್ಲಾ ಪ್ರಥಮ ಮಹಿಳಾ ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕವಯಿತ್ರಿ ಹಾಗೂ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಈ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಮನದಾಳದ ಭಾವನೆಗಳಿಗೆ ಸಾಹಿತ್ಯದ ಮೂಲಕ ಅಭಿವ್ಯಕ್ತಿ ದೊರಕುವಂತೆ ವೇದಿಕೆಗಳನ್ನು ನಿರ್ಮಿಸುವ ಅಗತ್ಯವಿದೆ ಎಂದು ಹೇಳಿದರು. ಮಹಿಳೆಯರಲ್ಲಿ ಅಡಗಿರುವ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ಬದುಕಿನ ಸವಾಲುಗಳನ್ನು ಎದುರಿಸುವ ಛಲವನ್ನು ಸಾಹಿತ್ಯ ಮತ್ತಷ್ಟು ಗಟ್ಟಿಗೊಳಿಸುತ್ತದೆ. ಇಂತಹ ಪ್ರತಿಭೆಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಜಿಲ್ಲಾ ಕಸಾಪದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಶರಣರಾಜ ಛಪ್ಪರಬಂದಿ, ಜಯಶ್ರೀ ಜಮಾದಾರ, ಶಿವಲೀಲಾ ಕಲಗುರ್ಕಿ, ಮಹಿಳಾ ನೌಕರರ ಸಂಘದ ರೇಣುಕಾ ಡಾಂಗೆ, ನಂದಿನಿ ಸನಬಾಳ, ರಾಜೇಂದ್ರ ಮಾಡಬೂಳ, ಗಣೇಶ ಚಿನ್ನಾಕಾರ, ಬಾಬುರಾವ ಪಾಟೀಲ, ಧರ್ಮರಾಜ ಜಾವಳಿ, ಸೋಮಶೇಖರಯ್ಯ ಹೊಸಮಠ, ಸೈಯ್ಯದ್ ನಜಿರುದ್ದಿನ್ ಮುತ್ತವಲ್ಲಿ, ರಮೇಶ ಡಿ. ಬಡಿಗೇರ, ರಾಜಶೇಖರ ಚೌದ್ರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಾಹಿತ್ಯ ಸೇವೆಯಲ್ಲಿ ಕ್ರಿಯಾಶೀಲರು
ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಆಯ್ಕೆಯಾದ ಶಕುಂತಲಾ ಪಾಟೀಲ ಜಾವಳಿ ಅವರು ಜಿಲ್ಲೆಯ ಸಾಹಿತ್ಯ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿರಿಯ ಕವಯಿತ್ರಿ ಮತ್ತು ಲೇಖಕಿ. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಶಿವಶರಣ ಪಾಟೀಲ ಜಾವಳಿ ಅವರ ಕುಟುಂಬದವರಾದ ಅವರು ಬಾಲ್ಯದಿಂದಲೇ ಓದು, ಬರಹ ಹಾಗೂ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ.
ಆಳಂದ ತಾಲೂಕಿನ ಜಾವಳಿ (ಡಿ) ಗ್ರಾಮದ ಮೂಲದವರಾದ ಶಕುಂತಲಾ ಪಾಟೀಲ ಜಾವಳಿ ಅವರು ‘ಜೀವನಯಾನ’ ಕವನ ಸಂಕಲನದ ಮೂಲಕ ಸಾಹಿತ್ಯ ಲೋಕಕ್ಕೆ ಪಾದಾರ್ಪಣೆ ಮಾಡಿದರು. ಗ್ರಾಮೀಣ ಬದುಕು, ಶರಣ ಸಂಸ್ಕೃತಿ ಹಾಗೂ ಮಾನವೀಯ ಮೌಲ್ಯಗಳನ್ನು ತಮ್ಮ ಬರಹಗಳಲ್ಲಿ ಅಭಿವ್ಯಕ್ತಿಗೊಳಿಸಿರುವ ಅವರು, ‘ಬೆಳಕು ಮೂಡಿದಾಗ’, ‘ಆಧುನಿಕ ವಚನಗಳು’, ‘ಬೆಳಕು ತುಂಬಿದ ಭಾವ ಅನುಭವಾಮೃತ’, ‘ಗ್ರಾಮೀಣ ಬದುಕಿನ ಬುತ್ತಿ’ ಸೇರಿದಂತೆ ಹಲವು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.
ಮಹಿಳಾ ಸಾಹಿತ್ಯಕ್ಕೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಆಯೋಜಿಸಿರುವ ಈ ಪ್ರಥಮ ಮಹಿಳಾ ಕಾವ್ಯ ಸಮ್ಮೇಳನ ಜಿಲ್ಲೆಯ ಕವಯಿತ್ರಿಯರಿಗೆ ಸೃಜನಶೀಲ ಅಭಿವ್ಯಕ್ತಿಗೆ ಮಹತ್ವದ ವೇದಿಕೆಯಾಗಲಿದೆ ಎಂದು ಸಂಘಟಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.



