ಸಿನಿಮಾ ಸುದ್ದಿ

ಬಿಗ್‌ಬಾಸ್ ಮನೆಯಲ್ಲಿ ಮೊದಲ ವಾರವೇ ಎಲಿಮಿನೇಟ್; ಪ್ರಥಮಾ ಪ್ರಸಾದ್‌ ಪಾಲಾದ ಅಪರೂಪದ ದಾಖಲೆ

ಬೆಂಗಳೂರು: ಬಿಗ್‌ಬಾಸ್ ಕನ್ನಡ ಸೀಸನ್‌ 13 ಆರಂಭದಿಂದಲೇ ವಿಭಿನ್ನ ಪ್ರಯೋಗಗಳಿಗೆ ಸಾಕ್ಷಿಯಾಗುತ್ತಿದೆ. ಕೆಲ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ ಪ್ರವೇಶ ಪಡೆದಿದ್ದರೆ, ಮತ್ತೊಂದೆಡೆ ಎಂಟು ಸ್ಪರ್ಧಿಗಳನ್ನು ವಿಮಾನದಲ್ಲಿಯೇ ಇರಿಸಲಾಗಿತ್ತು. ಈ ಎಂಟು ಮಂದಿಯೇ ಮೊದಲ ವಾರದ ಎಲಿಮಿನೇಷನ್‌ ಪಟ್ಟಿಯಲ್ಲಿದ್ದರು.

ಭಾನುವಾರದ ಎಪಿಸೋಡ್‌ನಲ್ಲಿ ನಿರೂಪಕ ಕಿಚ್ಚ ಸುದೀಪ್‌ ಅವರು ಸ್ಪರ್ಧಿಗಳನ್ನು ಒಬ್ಬೊಬ್ಬರಾಗಿ ಎಲಿಮಿನೇಷನ್‌ನಿಂದ ಸೇಫ್ ಮಾಡಿದರು. ಕೊನೆಯಲ್ಲಿ ಪ್ರಥಮಾ ಪ್ರಸಾದ್‌ ಹಾಗೂ ಕಿರಣ್‌ ಮಾತ್ರ ಉಳಿದುಕೊಂಡರು. ಬಳಿಕ ಇಬ್ಬರ ಕಣ್ಣಿಗೂ ಬಟ್ಟೆ ಕಟ್ಟಲಾಯಿತು. ವಿಮಾನದೊಳಗೆ ಕತ್ತಲು ಆವರಿಸುವುದರ ಜೊತೆಗೆ ಹೊಗೆ ಕೂಡ ತುಂಬಿಸಲಾಯಿತು. ಕೆಲ ಸಮಯದ ಬಳಿಕ ಬೆಳಕು ಬಂದಾಗ ಕಿರಣ್‌ ಮಾತ್ರ ವಿಮಾನದಲ್ಲಿದ್ದರು. ಈ ಮೂಲಕ ಪ್ರಥಮಾ ಪ್ರಸಾದ್‌ ಅವರ ಬಿಗ್‌ಬಾಸ್‌ ಪಯಣಕ್ಕೆ ತೆರೆ ಬಿತ್ತು.

ನಟಿ ಹಾಗೂ ನೃತ್ಯ ಕಲಾವಿದೆಯಾಗಿರುವ ಪ್ರಥಮಾ ಪ್ರಸಾದ್‌, ಬಿಗ್‌ಬಾಸ್‌ ಮನೆಗೆ ಹಲವು ನಿರೀಕ್ಷೆಗಳೊಂದಿಗೆ ಕಾಲಿಟ್ಟಿದ್ದರು. ತಾಯಿಯ ಹೆಸರಿನೊಂದಿಗೆ ಗುರುತಿಸಿಕೊಳ್ಳುವುದಕ್ಕಿಂತ, ತಮ್ಮದೇ ಆದ ಗುರುತನ್ನು ರೂಪಿಸಿಕೊಳ್ಳಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದರು.

ಆದರೆ ಅವರ ಈ ಪಯಣ ಒಂದು ವಾರಕ್ಕೆ ಸೀಮಿತವಾಯಿತು. ಬಿಗ್‌ಬಾಸ್‌ಗೆ ಪ್ರವೇಶಿಸಿದ ಬಳಿಕ ಒಂದು ವಾರವಿಡೀ ವಿಮಾನದಲ್ಲೇ ಇದ್ದು, ಮನೆಯೊಳಗೆ ಕಾಲಿಡುವ ಅವಕಾಶವೇ ಸಿಗದೆ ಎಲಿಮಿನೇಟ್‌ ಆದ ಮೊದಲ ಸ್ಪರ್ಧಿ ಎಂಬ ಅಪರೂಪದ ದಾಖಲೆಯೂ ಪ್ರಥಮಾ ಪ್ರಸಾದ್‌ ಅವರ ಪಾಲಾಗಿದೆ.

ಮನೆಯೊಳಗೆ ಆಟವಾಡುವ ಮುನ್ನವೇ ಬಿಗ್‌ಬಾಸ್‌ ಪಯಣ ಮುಗಿಸಿಕೊಂಡ ಪ್ರಥಮಾ, ಈ ವಿಭಿನ್ನ ಎಲಿಮಿನೇಷನ್‌ನಿಂದಲೇ ಸೀಸನ್‌ 13ರ ಆರಂಭದಲ್ಲಿ ಗಮನ ಸೆಳೆದಿದ್ದಾರೆ.

janabhipraya

https://janabhipraya.com

Related Articles

Leave a Reply

Your email address will not be published. Required fields are marked *

Back to top button